ಸೇಂದ್ರಕರು
	ಪ್ರಾಚೀನ  ಕರ್ನಾಟಕದಲ್ಲಿ ಆಳಿದ ಒಂದು ಸಾಮಂತ ಮನೆತನ. ಇವರ ವಿಚಾರವಾಗಿ ತಿಳಿದಿರುವ ಮಾಹಿತಿ ಬಲು ಕಡಿಮೆ. ಇವರದೇ ಆದ ಶಾಸನಗಳು ಸಿಕ್ಕಿಲ್ಲ. ಕದಂಬ, ರಾಷ್ಟ್ರಕೂಟ ಮತ್ತು ಬಾದಾಮಿಯ ಚಳುಕ್ಯ ಮನೆತನದ ಶಾಸನಗಳಲ್ಲಿ ಇವರ ಬಗೆಗೆ ಉಲ್ಲೇಖಗಳು ಮಾತ್ರ ದೊರಕುತ್ತವೆ. ಈಗ ನಮಗೆ ತಿಳಿದಿರುವಂತೆ ಬನವಾಸಿ 12000 ಎಂದು ಖ್ಯಾತವಾಗಿರುವ ಪ್ರದೇಶದಲ್ಲಿರುವ ನಗರಖಂಡ (ಇಂದಿನ ಶಿವಮೊಗ್ಗ ಜಿಲ್ಲೆಯ ಬಹುಭಾಗಗಳನ್ನು ಒಳಗೊಂಡ ಪ್ರದೇಶ) ಎಂದು ಹೆಸರಿಸಲಾಗಿರುವ ಪ್ರಾಚೀನ ಪ್ರಾಂತ್ಯ ಸೇಂದ್ರಕರ ಮೂಲನಿವಾಸ. ಇದು ಸೇಂದ್ರಕರಾಜ್ಯ ಅಥವಾ ಸೇಂದ್ರಕವಿಷಯ ಎಂದು ಶಾಸನಗಳಲ್ಲಿ ವರ್ಣಿತವಾಗಿದೆ. 

	ಇವರ ಬಗೆಗೆ ಪ್ರಾಚೀನತಮ ಉಲ್ಲೇಖ ದೊರೆಯುವುದು ಮಯೂರವರ್ಮನ ಚಂದ್ರವಳ್ಳಿ ಶಾಸನದಲ್ಲಿ. ಸುಮಾರು ನಾಲ್ಕನೆಯ ಶತಮಾನದ ಮಧ್ಯ ಭಾಗಕ್ಕೆ ಸೇರಬಹುದಾದ ಈ ಶಾಸನದಲ್ಲಿ ಮಯೂರಶರ್ಮ ಸಯಿಂದಕರನ್ನು ಜಯಿಸಿದುದಾಗಿ ಹೇಳಿದೆ. ಈ ಸಯಿಂದಕರೇ ಸೇಂದ್ರಕರು. ಆದರೆ ರಾಜನ ಹೆಸರನ್ನು ಹೇಳಿಲ್ಲ. ಐದನೆಯ ಶತಮಾನಕ್ಕೆ ಸೇರಬಹುದಾದ ಪಲ್ಲವ ದೊರೆ ಎರಡನೆಯ ಸಿಂಹವರ್ಮನ ಸಕ್ಕರೆಪಟ್ಟಣ ಶಾಸನದಲ್ಲಿ ಸೇಂದ್ರಕ ರಾಜ್ಯದ ಪ್ರಸ್ತಾಪ ಮಾತ್ರವಿದೆ. ಕನ್ನಡದ ಪ್ರಾಚೀನ ಶಾಸನವೆನಿಸಿರುವ ಹಲ್ಮಿಡಿ ಶಾಸನದಲ್ಲಿ ಸೇಂದ್ರಕ ರಾಜನೊಬ್ಬನು (ಹೆಸರು ಹೇಳಿಲ್ಲ) ಪಲ್ಲವರ ಮೇಲೆ ಯುದ್ಧ ಮಾಡಿದನೆಂದು ಹೇಳಿದೆ. ಮೊಟ್ಟಮೊದಲನೆಯ ಸೇಂದ್ರಕ ರಾಜನ ಹೆಸರು ನಮಗೆ ದೊರಕುವುದು ಕದಂಬ ಹರಿವರ್ಮನ ಹಲಶಿ ತಾಮ್ರಶಾಸನದಲ್ಲಿ. ಈ ಶಾಸನ ಸೇಂದ್ರಕ ವಂಶಕ್ಕೆ ಆಭರಣಪ್ರಾಯನಾಗಿದ್ದ ಭಾನುಶಕ್ತಿಯನ್ನು ಹೆಸರಿಸುತ್ತದೆ. ಇವನು ಕದಂಬ ಹರಿವರ್ಮನ ಸಾಮಂತನಾಗಿದ್ದ. ಕದಂಬ ದೊರೆ ಇಮ್ಮಡಿ ಕೃಷ್ಣವರ್ಮನ ಬೆಣ್ಣೂರು ಶಾಸನದಲ್ಲಿ ಸೇಂದ್ರಕ ವಿಷಯದ ಪ್ರಸ್ತಾಪವಿದೆ.

	ಅನಂತರ ಬಹುಶಃ ಸೇಂದ್ರಕರು ರಾಷ್ಟ್ರಕೂಟರ ಸಾಮಂತರಾದಂತೆ ತೋರುತ್ತದೆ. ರಾಷ್ಟ್ರಕೂಟ ದೆಜ್ಜ ಮಹಾರಾಜನ 532-33ರ ಶಾಸನದಲ್ಲಿ, ಸೇಂದ್ರಕ ವಂಶದ ವಿಜಯಾನಂದ ಮಧ್ಯಮರಾಜನ ಮಗನಾದ ಅಧಿರಾಜ ಇಂದ್ರನಂದನ ಉಲ್ಲೇಖವಿದೆ.

ಚಿತ್ರ-ಸೇಂದ್ರಕರ-ವಂಶಾವಳಿ 
	
	ಅನಂತರ ಸೇಂದ್ರಕರು ಬಾದಾಮಿಯ ಚಳುಕ್ಯರ ಸಾಮಂತರಾಗಿ ಕಾಣಿಸಿಕೊಳ್ಳುತ್ತಾರೆ. ಚಳುಕ್ಯ ಮಂಗಲೀಶನ (596-610) ಶಾಸನದಲ್ಲಿ ಸೇಂದ್ರಕ ಕಣ್ಣಶಕ್ತಿಯ ಮಗನಾದ ಕವಿಶಕ್ತಿಯ ಉಲ್ಲೇಖವಿದೆ. ಈ ಶಾಸನದಲ್ಲಿ ಇವರು ಫಣಿಕುಲ ಅಥವಾ ನಾಗವಂಶದವರೆಂದು ಹೇಳಿದೆ. ಕಣ್ಣಶಕ್ತಿಗೂ ಅವನ ಹಿಂದೆ ಆಳಿದ ಭಾನುಶಕ್ತಿಗೂ ಇದ್ದ ಸಂಬಂಧ ತಿಳಿದುಬಂದಿಲ್ಲ. ಇಮ್ಮಡಿ ಪುಲಕೇಶಿಯ ಚಿಪಳೂಣ ಶಾಸನದ ಪ್ರಕಾರ ಪುಲಕೇಶಿಯ ತಂದೆ ಮೊದಲನೆಯ ಕೀರ್ತಿವರ್ಮ ಸೇಂದ್ರಕ ರಾಜಕುಮಾರಿಯನ್ನು ಮದುವೆಯಾಗಿದ್ದನೆಂದು ತಿಳಿಯುತ್ತದೆ. ಅಂದರೆ ಪುಲಕೇಶಿಗೆ ಸೇಂದ್ರಕ ವಂಶದ ಶ್ರೀವಲ್ಲಭ ಸೇನಾನಂದರಾಜ ಸೋದರ ಮಾವನಾಗಿದ್ದ. ಇವನು ಪರಮಮಾಹೇಶ್ವರನಾಗಿದ್ದ. ಜೊತೆಗೆ ವಿಜಯಾನಂದ, ಇಂದ್ರನಂದ, ಸೇನಾನಂದ ಮೊದಲಾದ ಹೆಸರುಗಳಲ್ಲಿ ಸಾಮ್ಯತೆ ಇರುವುದು ಗಮನಾರ್ಹ ಸಂಗತಿ. ಸು.7ನೆಯ ಶತಮಾನಕ್ಕೆ ಸೇರಬಹುದಾದ ಭೀಮಶಕ್ತಿಯ ಹೆಸರು ಬಾದಾಮಿಯ ಬಂಡೆಯೊಂದರ ಮೇಲೆ ಕಾಣಬರುತ್ತದೆ. ಇವನು ಸೇಂದ್ರಕ ವಂಶದವನೆಂದೂ ಸತ್ಯಾಶ್ರಯ ದೊರೆಯ ಪಾದಪದ್ಮೋಪಜೀವಿಯೆಂದೂ ಈ ಶಾಸನಗಳು ತಿಳಿಸುತ್ತವೆ. ಲಕ್ಷ್ಮೇಶ್ವರದ ಶಾಸನವೊಂದು ಸೇಂದ್ರಕ ವಂಶದ ವಿಜಯಶಕ್ತಿಯ ಮೊಮ್ಮಗನೂ ಕುಂದಶಕ್ತಿಯ ಮಗನೂ ಇಮ್ಮಡಿ ಪುಲಕೇಶಿಯ ಸಾಮಂತನೂ ಆದ ದುರ್ಗಶಕ್ತಿಯನ್ನು ಉಲ್ಲೇಖಿಸುತ್ತದೆ. ಚಳುಕ್ಯ ವಿನಯಾದಿತ್ಯನ ಕಾಲದಲ್ಲಿ ಶ್ರೀ ಪೊಗಿಲ್ಲ ಸೇಂದ್ರಕ ಮಹಾರಾಜನು ನಗರಖಂಡದಲ್ಲಿ ಸಾಮಂತನಾಗಿ ಆಳುತ್ತಿದ್ದ. ಇಮ್ಮಡಿ ಕೀರ್ತಿವರ್ಮನ (745-57) ಕಾಲದಲ್ಲಿ ಸೇಂದ್ರಕ ವಂಶಕ್ಕೆ ಆಭರಣದಂತೆ ಇದ್ದ ನಾಗಶಕ್ತಿ ಆಳುತ್ತಿದ್ದ. ಇದೇ ಚಳುಕ್ಯ ದೊರೆಯ ಕಾಲದಲ್ಲಿ ಮಾಧವತ್ರಿಯರಸ (ಮಾಧವಶಕ್ತಿ) ಎಂಬ ಸೇಂದ್ರಕ ಆಳುತ್ತಿದ್ದ. ಆದರೆ ಈ ಮೇಲೆ ಹೇಳಿದ ಸೇಂದ್ರಕ ರಾಜರ ಪರಸ್ಪರ ಸಂಬಂಧ ಮಾತ್ರ ತಿಳಿದಿಲ್ಲ. ಅನಂತರ ಕರ್ನಾಟಕದಲ್ಲಿ ಸೇಂದ್ರಕರು ಅವನತಿ ಹೊಂದಿದರೆಂದು ತಿಳಿದುಬರುತ್ತದೆ. 

	ಸೇಂದ್ರಕರು ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಖಾನ್‍ದೇಶ ಮತ್ತು ಆಂಧ್ರ ದೇಶಗಳಲ್ಲಿಯೂ ಆಳಿದರು. ಇವರಿಗೂ ಕರ್ನಾಟಕದ ಸೇಂದ್ರಕರಿಗೂ ಇದ್ದ ಸಂಬಂಧ ತಿಳಿದಿಲ್ಲ. ಬಹುಶಃ ಕರ್ನಾಟಕದಿಂದ ಖಾನ್‍ದೇಶ, ಗುಜರಾತ್ ಮತ್ತು ಆಂಧ್ರದೇಶಗಳಿಗೆ ಸು.7ನೆಯ ಶತಮಾನದಲ್ಲಿ ವಲಸೆ ಹೋಗಿರಬಹುದು ಎಂದು ಊಹಿಸಬಹುದು.			
	(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ